Search This Blog

Tuesday 1 January 2019

ವೇದ ಪ್ರಸಾರ ನಿರತ ಡಾ. ಕದ್ರಿ ಪ್ರಭಾಕರ ಅಡಿಗ



ರತ ಖಂಡದ ಸಮಸ್ತ ಸಂಸ್ಕೃತಿ ವೇದಗಳೆಂದು ಕರೆಯಲ್ಪಡುವ ಸನಾತನ ಸಾಹಿತ್ಯದ ತಳಹದಿಯ ಮೇಲೆ ವಿಕಸನಗೊಂಡಿದೆ. ಹಲವು ಸಂಸ್ಕಾರಗಳು ಈ ಸಂಸ್ಕೃತ ವಾಙ್ಮಯದೊಂದಿಗೆ ನಿಚ್ಚಳವಾಗಿ ತಳಕು ಹಾಕಿಕೊಂಡಿದ್ದರೆ, ಕೆಲವು ಆಚಾರ-ವಿಚಾರಗಳು ಅಪರೋಕ್ಷವಾಗಿ ವೇದದ ಮೇಲೆ ಆಧರಿತವಾಗಿವೆ. ಧರ್ಮದ ಅರಿವು ಮತ್ತು ಆಚರಣೆಗೆ ವೇದಗಳೇ ಮೂಲ. ಧರ್ಮಾಧರ್ಮ, ನ್ಯಾಯಾನ್ಯಾಯದ ವಿವೇಚನೆಗೂ ವೇದಗಳು ಪೂರಕ.

    ಭಗವಾನ್ ವೇದವ್ಯಾಸರಿಂದ ಚತುರ್ಭಾಗಗಳಾಗಿ ವಿಂಗಡಿಸಲ್ಪಟ್ಟ ವೇದಗಳು ಅಪೌರೇಷಯವಾದರೂ, ವೇದಾಧ್ಯಯನಕ್ಕೆ ಪುರುಷ ಪ್ರಯತ್ನ ಅತ್ಯಾವಶ್ಯಕ. ಆದರೆ ಹಲವರು ನಿರಾಸಕ್ತಿಯಿಂದ ದೂರ ಉಳಿದರೆ, ಕೆಲವರಿಗೆ ಸಂಸ್ಕೃತ ಕಬ್ಬಿಣದ ಕಡಲೆ ಎನ್ನುವ ಭ್ರಮೆ, ಉಳಿದವರಿಗೆ ಮಡಿವಂತಿಕೆಯ ಭಯ. ಸೂಕ್ತ ಮಾರ್ಗದರ್ಶನ ದೊರೆತಾಗ ವೇದಗಳು ಸಾಧನೆಗೆ ನಿಲುಕದ ನಕ್ಷತ್ರಗಳಲ್ಲ.

     ಭಾರತದ ಈ ಮೇರು  ಜ್ಞಾನಾಮೃತವನ್ನು ಆಸಕ್ತರಿಗೆ ಉಣಬಡಿಸುವ ಕಾಯಕದಲ್ಲಿ ನಿರತರಾಗಿರುವವರು ಮಂಗಳೂರಿನ ಡಾ. ಕದ್ರಿ ಪ್ರಭಾಕರ ಅಡಿಗ. ಅನಾಸಕ್ತರಲ್ಲಿಯೂ ಆಸಕ್ತಿ ಹುಟ್ಟಿಸಿ, ಕ್ಲಿಷ್ಟವೆನ್ನುವವರಿಗೆ ಸರಳಗೊಳಿಸಿ, ತಿಳಿದವರನ್ನು ತಿದ್ದಿ ವೇದಪ್ರಸಾರವನ್ನು ಪ್ರವೃತ್ತಿಯಾಗಿಸಿಕೊಂಡವರು.

     ಮಂಗಳೂರಿನಲ್ಲಿ ಹತ್ತನೆಯ ಇಯತ್ತೆಯ ತನಕ ವಿದ್ಯಾಭ್ಯಾಸ. ಬಳಿಕ ವಂಶಪಾರಂಪರ್ಯವಾಗಿ ಬಂದ ಕದ್ರಿ ಶ್ರೀ ಮಂಜುನಾಥ ದೇವರ ಪೂಜಾ ಕೈಂಕರ್ಯಗಳಿಗೆ ಸನ್ನದ್ಧರಾಗಲು ಸಾಲಿಗ್ರಾಮದ ವಾಣೀ ವಿಲಾಸಿನೀ ವೇದಪಾಠ ಶಾಲೆಯಲ್ಲಿ ಅಧ್ಯಯನವನ್ನು ಆರಂಭಿಸಿದರು. ಸಂಸ್ಕೃತ ವಾಙ್ಮಯದ ಆಳ-ಅಗಾಧತೆಗಳು ಯುವ ಅಡಿಗರನ್ನು ಬೆರಗುಗೊಳಿಸಿದವು. ವೈದಿಕ ಸಾಹಿತ್ಯದ ಅಭ್ಯಾಸ ಅವರ ಜೀವನದ ಗುರಿಯಾಯಿತು.

    ಉಡುಪಿಯ ಶ್ರೀ ಮನ್ಮಧ್ವಸಿದ್ಧಾಂತ ಪ್ರಬೋಧಿನಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ವೇದಾಂತ ವಿದ್ವತ್ತಿನಲ್ಲಿ ಪದವಿ, ಶೃಂಗೇರಿ ರಾಜೀವ ಗಾಂಧಿ ವಿದ್ಯಾಪೀಠದಿಂದ ಶಿಕ್ಷಾಶಾಸ್ತ್ರಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಮತ್ತು ತಿರುಪತಿಯ ಕೇಂದ್ರೀಯ ವಿದ್ಯಾಪೀಠದಿಂದ ಡಾಕ್ಟರೇಟ್ ಪದವಿ ಗಳಿಸಿದರು.



     ಅಡಿಗರ ಜ್ಞಾನದಾಹ ಪದವಿಗಳ ಚೌಕಟ್ಟಿಗೆ ಸೀಮಿತವಾಗಲಿಲ್ಲ. ಈ ಅಧ್ಯಯನಗಳು ಅವರನ್ನು ಮತ್ತಷ್ಟು ಸಂಶೋಧನೆಗಳಿಗೆ ಅಣಿಗೊಳಿಸಿದವು. ಸ್ವಾಧ್ಯಯನದಲ್ಲಿ ನಿರತರಾದರು. ವಿಷಯನಿಷ್ಣಾತರನ್ನು ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸಿಕೊಂಡರು. ಚತುರ್ವೇದಗಳಲ್ಲಿ ಪಾರಂಗತರಾದರು. ಘನ ವೇದ ವಿದ್ವತ್ತನ್ನು ಪಡೆದರು. ಅನೇಕ ಸಂಹಿತಾ ಯಾಗಗಳಲ್ಲಿ ಭಾಗವಹಿಸಿದ ಹಿರಿಮೆ ಅಡಿಗರದ್ದು. ಸಂಪೂರ್ಣ ಭಗವದ್ಗೀತೆ, ಬ್ರಹ್ಮಸೂತ್ರ, ಪಾಣಿನೀಯಶಿಕ್ಷಾಗಳು ಇವರಿಗೆ ಕಂಠಪಾಠ ಮತ್ತು ಇವುಗಳನ್ನು ನಿತ್ಯ ಪಠಿಸುತ್ತಾರೆ ಸಹ.

   ವೈದಿಕ ವ್ಯಾಕರಣದನ್ವಯ ಅಸ್ಖಲಿತ, ಶ್ರುತಿಬದ್ಧ ಮಂತ್ರೋಚ್ಚಾರಣೆಗೆ ಅಡಿಗರು ಹೆಸರುವಾಸಿಯಾಗಿದ್ದಾರೆ.  ಅಪೇಕ್ಷಣೀಯ ಅರ್ಥ, ಫಲಗಳಿಗಾಗಿ ಅಕ್ಷರ, ಸ್ವರ, ಉಚ್ಚಾರಣೆ ಯುಕ್ತವಾಗಿರಬೇಕು, ಜೊತೆಯಲ್ಲಿ ಪಠಣ, ಶ್ರುತಿ-ಲಯ ಬದ್ಧವಾಗಿರಬೇಕು ಇತ್ಯಾದಿ ಅಂಶಗಳನ್ನು ಬಲವಾಗಿ ಪ್ರತಿಪಾದಿಸುವ ಅಡಿಗರು, ವೇದದ ಸ್ವರಪ್ರಕ್ರಿಯೆ ಹಾಗೂ ಛಂದಸ್ಸುಗಳನ್ನು ಆಳ ಅಧ್ಯಯನದಿಂದ ಮೈಗೂಡಿಸಿಕೊಂಡಿದ್ದಾರೆ.

      ಮಂಜುನಾಥ ದೇವರ ಪೂಜೆ ಮತ್ತು ಪೌರೋಹಿತ್ಯ ವೃತ್ತಿಯಾದರೂ, ಅಡಿಗರ ಒಲವು ಶಾಸ್ತಾಧ್ಯಯನ ಮತ್ತು ಅಧ್ಯಾಪನದತ್ತ.  ಕಿರಿಯರಿಂದ ತೊಡಗಿ ಹಿರಿಯರವರೆಗೆ ವೇದಪಾಠ ತರಗತಿಗಳನ್ನು ನಿರ್ವಹಿಸಿದ್ದಾರೆ. ಉಡುಪಿಯ ಅಷ್ಟಮಠಗಳ ಹಲವು ಯತಿಗಳ ಪರ್ಯಾಯ ಅವಧಿಯಲ್ಲಿ ವೇದಾಧ್ಯಾಪನ ನಡೆಸಿದ್ದಾರೆ. ಮನೆ, ಮಠ, ಮಂದಿರಗಳಲ್ಲಿ ವೇದ ಪಠಣ ತರಭೇತಿ ನೀಡುತ್ತಿದ್ದಾರೆ. ಊರು-ಪರವೂರು, ಹೊರರಾಜ್ಯಗಳ ಅನೇಕ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಅಡಿಗರು ಸಂಭಾವ್ಯ ಅಪಾರ್ಥಗಳನ್ನು ಬೊಟ್ಟುಮಾಡಿ, ಅವು ಮರುಕಳಿಸದಂತೆ ಮನದಟ್ಟು ಮಾಡಿಸುತ್ತಾರೆ. ಪ್ರಭಾಕರ ಅಡಿಗರ ಸಂಸ್ಕೃತ ಮತ್ತು ವೇದಾಧ್ಯಯನ ತರಭೇತಿಗಳೆಂದರೆ ರಸಗ್ರಹಣ ತರಗತಿಗಳಂತೆ. ಶಾಲೆಯೊಂದರಲ್ಲಿ ಸುದೀರ್ಘ ಕಾಲ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಪೂರ್ವ ಪಾಂಡಿತ್ಯದಿಂದಾಗಿ ಎಲ್ಲ ವಯೋಮಾನದ ಶಿಷ್ಯರನ್ನು ಸಂಪಾದಿಸಿದ್ದಾರೆ.



     ವೇದಪ್ರಸಾರದ ಅಂಗವಾಗಿ ಡಾ. ಅಡಿಗರು ಪಾಣಿನೀಯ ಶೌನಕೀಯ ವೈದಿಕ ಸ್ವರ ಪ್ರಕರಣಮ್, ಶೌನಕೋಕ್ತ ವೈದಿಕ ಛಂದಃ ಪ್ರಕರಣಮ್,  ವೈದಿಕಮಂತ್ರಮಾಲಾ, ಸವಿಷ್ಣು ಶಿವಾರ್ಚನಮ್, ಕನ್ನಡದಲ್ಲಿ ಪಾಣಿನೀಯ ಶಿಕ್ಷಾ ಇತ್ಯಾದಿ ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ತನ್ನ ಎಳೆಯ ಶಿಷ್ಯ ನಿಷ್ಕಲ್ ರಾವ್ ಗೆ ತುಳು-ಕನ್ನಡ ಲಿಪಿಯ ಪುಸ್ತಕ ಶ್ರೀಹರಿಸ್ತುತಿ ಬರೆಯಲು ಮಾರ್ಗದರ್ಶನ ನೀಡಿದ್ದಾರೆ.

     ಇದಮಿತ್ಥಂ ಎನ್ನಲಾಗದ ಅಪೂರ್ವ ಜ್ಞಾನಭಂಡಾರ ಐವತ್ಮೂರರ ಹರೆಯದ ಡಾ.ಕದ್ರಿ ಪ್ರಭಾಕರ ಅಡಿಗ. ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕುತ್ತಿರುವ ತುಂಬಿದಷ್ಟೂ ತುಳುಕದ ಕೊಡ.