Search This Blog

Thursday 30 December 2021

ಬಂದೇ ಬಂತು ಧನುರ್ಮಾಸ...

 

ಸಾ

ಲು ಸಾಲು ಹಬ್ಬಗಳು ಹಿನ್ನೆಲೆಗೆ ಸರಿದಿವೆ.  ಹಬ್ಬದ ಸಡಗರ ಸಂಭ್ರಮಗಳು ಕಡಿಮೆಯಾಗುತ್ತಿದಂತೆ ಚುಮುಚುಮು ಚಳಿ ಆರಂಭವಾಗಿದೆ.  ಡಿಸೆಂಬರ್ ತಿಂಗಳಾದಿಯ ಕೆಲವು ದಿನಗಳ ಬಳಿಕ ವಾತಾವರಣದ ಉಷ್ಣತೆ ಮೆಲ್ಲಮೆಲ್ಲನೆ ಇಳಿಯತೊಡಗಿದೆ. ಬೆಳಿಗ್ಗೆ ಬೇಗ ಏಳಲೊಲ್ಲೆ ಎನ್ನುತಿವೆ ತನು-ಮನ. ಏನೋ ಒಂದು ತರಹದ ಆಲಸ್ಯ, ಖಿನ್ನತೆ.   ಹೀಗಿರುತ್ತಾ ನೋಡ ನೋಡುತ್ತಿದ್ದಂತೆ ಅಗೋ ಬಂದೇ ಬಂತು ಧನುರ್ಮಾಸ!

ಈ ಅವಧಿ ಸೂರ್ಯನು ಧನು ರಾಶಿಯನ್ನು ಕ್ರಮಿಸುವ ಕಾಲ.  ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಉತ್ತರಾರ್ಧದಿಂದ ಜನವರಿ ತಿಂಗಳ ಪೂರ್ವಾರ್ಧದಲ್ಲಿ ಬರುವ ಮಾಸ.   ಚಾಂದ್ರಮಾನದ ಮಾರ್ಗಶಿರ ಮತ್ತು ಪುಷ್ಯ ಮಾಸದ ಭಾಗಗಳನ್ನೊಳಗೊಂಡ ಸೌರಮಾನದ ಧನುರ್ಮಾಸ ಶೂನ್ಯ ಮಾಸ, ಚಾಪ ಮಾಸ, ಕೋದಂಡ ಮಾಸ, ಕಾರ್ಮುಕ ಮಾಸ ಇತ್ಯಾದಿ ಪರ್ಯಾಯ ಹೆಸರುಗಳಿಂದಲೂ ಗುರುತಿಸಿಕೊಂಡಿದೆ.  ಅಧ್ಯಾತ್ಮ ಸಾಧನೆಗಿದು ಪರ್ವ ಕಾಲ.

      ಮಾನವರ ಒಂದು ವರ್ಷ ದೇವತೆಗಳ ಒಂದು ದಿನ. ಉತ್ತರಾಯಣ ಹಗಲಾದರೆ, ದಕ್ಷಿಣಾಯನ ರಾತ್ರಿ. ದಕ್ಷಿಣಾಯನದ ಕೊನೆಯ ಧನು ತಿಂಗಳು ದೇವ-ದೇವತೆಗಳ ಹಗಲಿನ ಬ್ರಾಹ್ಮೀ ಮುಹೂರ್ತ.  ಪೂಜೆ ಅರ್ಚನೆಗಳಿಗೆ ಪ್ರಶಸ್ತ ಕಾಲ. ಆದ್ದರಿಂದ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ದೇವತೆಗಳ ಬ್ರಾಹ್ಮೀ ಮುಹೂರ್ತವಾದ ಧನುರ್ಮಾಸದುದ್ದಕ್ಕೂ ಪರಮಾತ್ಮನನ್ನು ಅರ್ಚಿಸಿದರೆ, ಆತ ಸಕಲ ಸೌಭಾಗ್ಯಗಳನ್ನು  ಅನುಗ್ರಹಿಸುವನೆಂಬ ನಂಬಿಕೆ.

      ಈ ತಿಂಗಳ ಪರ್ಯಂತ ಆಸ್ತಿಕರು ಅರುಣೋದಯ ಕಾಲದಲ್ಲೇ ಎದ್ದು ಸ್ನಾನ, ನಿತ್ಯಾಹ್ನೀಕಗಳನೆಲ್ಲ ಪೂರೈಸಿ ಸೂರ್ಯೋದಯದ ಮೊದಲೇ ಪೂಜೆ ಮುಗಿಸುತ್ತಾರೆ. ಬಾನಲ್ಲಿ ನಕ್ಶತ್ರಗಳು ಮಿನುಗುತ್ತಿರುವಾಗಲೇ ನಡೆಸಿದ ಪೂಜೆ ಸಂಪೂರ್ಣ ಫಲಪ್ರದವೆಂದೂ, ವಿಳಂಬಿಸಿದಷ್ಟೂ ಫಲಕ್ಷಯವಾಗುತ್ತಾ, ಮಧ್ಯಾಹ್ನ ಪೂಜೆ ನಿಷ್ಫಲವೆಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಈ ಮಾಸದಲ್ಲಿ ಮುಂಜಾವದಲಿ ಭಗವಂತನ ಪೂಜೆಗೈಯದಿದ್ದರೆ ಜನ್ಮಾಂತರಗಳಲ್ಲಿ ದಾರಿದ್ರ್ಯ, ಅನಾರೋಗ್ಯ ಕಾಡುವುದೆಂದು ಶಾಸ್ತ್ರಗಳು ಹೇಳಿವೆ.  ಹೌದು, ಚಳಿ ಚಳಿಯೆಂದು ಏರು ಹೊತ್ತಿನ ತನಕ ಹಾಸಿಗೆ ಬಿಟ್ಟೇಳದ ಮಂದಿಗೆ ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುವುದೆಂತು? ಚಳಿಯೆಂದು ಬಿಸಿಲೇರುವಾಗ ಎದ್ದು ಆಲಸ್ಯವನ್ನು ಕೊಡವಿ ಕೆಲಸಕ್ಕೆ ಅಣಿಯಾಗುವಾಗ ಹೊತ್ತು ಬಹಳ ಮೀರಿರುತ್ತದೆ. ನಮ್ಮ ಕೆಲಸ-ಸಾಧನೆಯ ಬಹುಪಾಲು ಅವಧಿ ಮಲಗಿಯೇ ಮುಗಿದಿರುತ್ತದೆ. ಧನುರ್ಮಾಸದಲ್ಲಿ ಹಗಲಿನ ಅವಧಿಯೂ ಕಿರಿದಾಗಿರುತ್ತದೆ. ಅದಕ್ಕಾಗಿಯೇ ಇರಬಹುದು ಈ ತರಹದ ಶಾಸ್ತ್ರದ ಕಟ್ಟುಪಾಡು.

      ಕೊರೆವ ಚಳಿಯಾದರೂ ನದಿ-ಕೆರೆಗಳಲ್ಲಿ  ಮಿಂದರೆ ಉತ್ತಮ. ನದಿ-ತೊರೆಯತ್ತ ಗಮಿಸುವ ಒಂದೊಂದು ಹೆಜ್ಜೆಯೂ ನಮ್ಮ ಪುಣ್ಯದ ಖಾತೆಯನ್ನು ಹಿಗ್ಗಿಸುತ್ತದೆ ಎಂದು ಹೇಳುತ್ತಾರೆ.  ತಣ್ಣೀರ ಸ್ನಾನ ನಮ್ಮ ದೇಹದ ಜಡತ್ವವನ್ನು ಕಿತ್ತೊಗೆದು ಹೊಸ ಚೈತನ್ಯವನ್ನು ತಂದು ದಿನದ ಕೆಲಸಕ್ಕೆ ಅನುವಾಗಿಸುತ್ತದೆ.  ಶಬರಿಮಲೆ ಯಾತ್ರಾರ್ಥಿಗಳು 48 ದಿನಗಳ ವ್ರತದ ಅವಧಿ ಧನು ತಿಂಗಳನ್ನೂ ಒಳಗೊಂಡಿರುತ್ತದೆ.  ಚಳಿಯನ್ನು ಲೆಕ್ಕಿಸದೆ ಬೆಳ್ಳಂಬೆಳಿಗ್ಗೆ ತಣ್ಣೀರ ಸ್ನಾನ ನಿತ್ಯಾನುಷ್ಥಾನಗಳಲ್ಲಿ ತೊಡಗುವ ಅಯ್ಯಪ್ಪನ ಭಕ್ತರಿಗೂ ಈ ಮಾಸ ಶ್ರೇಷ್ಠ.

      ಅಕ್ಕಿ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿ ಈ ಅವಧಿಯ ಪೂಜೆಗೆ ವಿಶೇಷ ನೈವೇದ್ಯ.  ಹೆಸರುಬೇಳೆ ಹೊಟ್ಟೆಗೆ ಹಿತವಾದರೆ, ಬಳಸುವ ಇತರ ಸಾಮಗ್ರಿಗಳಾದ ಶುಂಠಿ, ಲವಂಗ, ಹಸಿಮೆಣಸು ಚಳಿಯಲ್ಲಿ ಹೊಟ್ಟೆಯನ್ನು ಬೆಚ್ಚಗಿಟ್ಟು, ಜೀರ್ಣಶಕ್ತಿಯನ್ನು ಉದ್ದೀಪನಗೊಳಿಸಿದರೆ, ತೆಂಗಿನಕಾಯಿ, ತುಪ್ಪಗಳು  ಚರ್ಮ ಬಿರುಕು ಬಿಡುವ ಈ ಕಾಲದಲ್ಲಿ ಚರ್ಮದ ಜೀವಕೋಶಗಳನ್ನು ಪುನರ್ರಚಿಸಲು ಸಹಾಯ ಮಾಡುತ್ತವೆ. ಜೀರಿಗೆ, ಕಾಳುಮೆಣಸುಗಳನ್ನು ಸೇರಿಸಿ ತಯಾರಿಸುವ ಪೊಂಗಲ್ ತಮಿಳುನಾಡಿನ ಜನಪ್ರಿಯ ಖಾದ್ಯ. ಈ ಮುದ್ಗಾನ್ನ ಕರ್ನಾಟಕದ ಹುಗ್ಗಿಗಿಂತ ಕೊಂಚ ಭಿನ್ನ. ಕರ್ನಾಟಕದಲ್ಲಿ ನೈವೇದ್ಯಕ್ಕೆ ಉಪಯೋಗಿಸುವ ಗುಡಾನ್ನದ ಸ್ವಾದವನ್ನು ಹೋಲುವ ಸಿಹಿ ಪೊಂಗಲನ್ನು ಸಹ ತಮಿಳರು ತಯಾರಿಸುತ್ತಾರೆ.  

      ದೇವರಿಗೆ ಸಮರ್ಪಿಸಿದ ಹುಗ್ಗಿ ಮತ್ತು ಕಂಬಳಿ ಇತ್ಯಾದಿಗಳ ದಾನ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಚಳಿಗಾಲದ ಅಭಾವದ ದಿನಗಳಲ್ಲಿ ಹಸಿದ ಹೊಟ್ಟೆಗೆ ಇನಿತು ಆಹಾರ, ಚಳಿಗೆ ಹೊದೆಯಲೊಂದು ಕಂಬಳಿ ಅಗತ್ಯವಿರುವವರಿಗೆ ದೊರಕಿದರೆ.. ವಾಹ್! ಪಡೆದವನ ಸಂತೋಷವೆಷ್ಟಿರಬಹುದು? ಆ ಕ್ಷಣದಲ್ಲಿ ವಜ್ರವೈಡೂರ್ಯಕ್ಕಿಂತಲೂ ಮಿಗಿಲಾದ ದಾನವದು. ನೀಡಿದಾತನನ್ನು ಪಡೆದಾತ ಮನತುಂಬಿ ಹರಸದಿರುವನೇ? ಭಗವಂತ ತಥಾಸ್ತು ಎನ್ನುತ್ತಾನೆ.

      ತಿರುಪತಿ ತಿಮ್ಮಪ್ಪನ ಸನ್ನಿಧಿ ಸೇರಿದಂತೆ, ಹಲವಾರು ದೇವಸ್ಥಾನಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ವಿಶೇಷ ಪೂಜೆ ಅರ್ಚನೆಗಳು ನಡೆಯುತ್ತವೆ. ನಡುಗುವ ಚಳಿಯನ್ನು ಲೆಕ್ಕಿಸದೇ ಭಕ್ತರು ದೇವಸ್ಥಾನಗಳತ್ತ ಧಾವಿಸಿ, ಧ್ಯಾನ, ಅರ್ಚನೆ, ಪೂಜೆಗಳಲ್ಲಿ ಭಾಗಿಯಾಗುತ್ತಾರೆ. ಸಂಪ್ರದಾಯಸ್ಥರ ಮನೆಗಳಲ್ಲೂ ಬೆಳಗಿನ ಜಾವದಲ್ಲೇ ಪೂಜೆಗಳು ನಡೆಯುತ್ತವೆ. ವೈಕುಂಠ ಏಕಾದಶಿ, ಧನುರ್ವ್ಯತೀಪಾತ ಮತ್ತು ಧನುರ್ವೈಧೃತಿ ಈ ಅವಧಿಯಲ್ಲಿ ಬರುವ ಪರ್ವ ಕಾಲಗಳು.

      ಧನುರ್ಮಾಸ ದೇವತಾರಧನೆಗೆ ಮೀಸಲು. ದೇವತಾ ಕಾರ್ಯಗಳಿಂದ ಜನರು ವಿಮುಖರಾಗಬಾರದೆಂದು  ಮದುವೆ, ಮುಂಜಿ, ಗ್ರೃಹಪ್ರವೇಶಗಳಂತಹ ಸಡಗರ, ಸಂಭ್ರಮೋಲ್ಲಾಸಗಳು ನಿಷಿದ್ಧ. ಬಹುಶಃ ಇದಕ್ಕಾಗಿಯೇ ಇದು ಶೂನ್ಯಮಾಸ.  ಸೂರ್ಯನು ಧನು ರಾಶಿಯಲ್ಲಿ ಅಸ್ತವಾಗುವದರಿಂದ, ಶುಭಕೆಲಸಗಳಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ.  ಅಪರಿಮಿತ ಪುಣ್ಯ ಸಂಪಾದನೆಗೆ, ಮೋಕ್ಷದ ದಾರಿಗೆ ಅವಕಾಶವಿರುವ ಈ ಪರ್ವ ಕಾಲ ಶೂನ್ಯ ಮಾಸವಾವುಗುವುದೆಂತು? ಇದು ದೇವ ಮಾಸ. ಚೆನ್ನೈ ನಗರದಲ್ಲಿ  ಒಂದು ತಿಂಗಳಿಡೀ ನಡೆಯುವ ಸಂಗೀತ-ನೃತ್ಯ ಮಹೋತ್ಸವ ಧನುರ್ಮಾಸದಲ್ಲಿ ಭಕ್ತಿಯ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದಲೇ ಆರಂಭಗೊಂಡಿರಬೇಕು.  

     'ಮಾಸಾನಾಂ ಮಾರ್ಗಶೀರ್ಷಃ ಅಹಮ್’', ಮಾರ್ಗಶಿರ ಮಾಸವೇ ನಾನೆಂದು ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ತಿಳಿಸಿದ್ದಾನೆ. ಭಗವಂತನನ್ನು ಅರ್ಚಿಸಲು ಬಹುಶಃ ಇದಕ್ಕಿಂತ ಪುಣ್ಯಕಾಲ ಇನ್ನೊಂದಿಲ್ಲ.  ಮಾರ್ಗಶಿರ ಮಾಸದ ಭಾಗವೂ ಆಗಿರುವ ಧನು ತಿಂಗಳಲ್ಲಿ, ಭಗವಂತನನ್ನು ಅರ್ಚಿಸಿ ಕೃತರ್ಥರಾದ ಹಲವಾರು ಉದಾಹರಣೆಗಳು ಪುರಾಣಗಳಲ್ಲಿ ಸಿಗುತ್ತವೆ. ಧನುರ್ಮಾಸ ಆಸ್ತಿಕರಿಗೆ ಅಧ್ಯಾತ್ಮದ ಹೊಳಹನ್ನು ತೋರಿದರೆ, ಲೌಕಿಕರಿಗೆ ಜೀವನ ಪಾಠವನ್ನು ಕಲಿಸಿಕೊಡುತ್ತದೆ.  ಯಾವ ದೃಷ್ಟಿಯಿಂದ ಪಾಲಿಸಿದರೂ ಆತ್ಮೋದ್ಧಾರ, ದೇಹಾರೋಗ್ಯ, ಮಾನಸಿಕ ಸಂತುಲನೆಗಳಿಗೆ ದೇವರೇ ತೋರಿದ ದಾರಿ ಧನುರ್ಮಾಸದ ಆಚರಣೆಗಳು.