ಬಾ |
ಲ್ಯದಲ್ಲಿ ಕಿವಿಗಿನಿಯಾಗಿ ಗುನುಗುತ್ತಿದ್ದ, ಹಾಡುತ್ತಿದ್ದ ಪುರಂದರದಾಸರ ಭಜನೆಗಳು, ಬೆಳೆಯುತ್ತಾ ಎಷ್ಟುಬಾರಿ ಕೇಳಿದರೂ ಸಾಲದೆನಿಸುವ ವಿಠಲನ ಮರಾಠಿ ಅಭಂಗಗಳ ರೋಮಾಂಚನದ ಮೋಡಿ ಮುಂದೆಂದಾದರೂ ಪಂಢರಪುರದ ಪಾಂಡುರಂಗನನ್ನೊಮ್ಮೆ ನೋಡಬೇಕೆನ್ನುವ ಬಯಕೆಯೊಂದನ್ನು ಮನದ ಮೂಲೆಯಲ್ಲಿ ಹುಟ್ಟಿಹಾಕಿತ್ತು. ಮೊದಲೊಮ್ಮೆ ಪಾಂಡುರಂಗನ ದರುಶನಕ್ಕಾಗಿ ಹೊರಡುವವರಿದ್ದೇವಾದರೂ, ಕೊನೆಕ್ಷಣದಲ್ಲಿ ಮುಂದೂಡಿದೆವು. ಬಹುಶಃ ನಮ್ಮ ಅಂದಿನ ನಿರ್ಧಾರ ಅವನಿಚ್ಛೆಯಾಗಿರಲಿಲ್ಲ.
ಇದಾಗಿ ಹಲಸಮಯದ ಬಳಿಕ ಕೆಲತಿಂಗಳ ಹಿಂದೆ ಕಾರ್ತಿಕಹುಣ್ಣಿಮೆಯ ಚುಮುಚುಮು ಚಳಿಯ ಮುಂಜಾನೆ ಪಂಢರಪುರದಲ್ಲಿ ಬಸ್ಸಿನಿಂದಿಳಿದೆವು. ವಸತಿಗೃಹದಲ್ಲಿ ಸ್ನಾನಾದಿಗಳನ್ನು ಪೂರೈಯಿಸಿ ಅನತಿದೂರದಲ್ಲಿರುವ ಪಾಂಡುರಂಗನ ದೇಗುಲಕ್ಕೆ ಹೊರಟೆವು. ಮಂದಿರದ ಪರಿಸರದಲ್ಲಿ ದೂರದೂರುಗಳಿಂದ ಆಗಮಿಸಿದ ಶ್ರದ್ಧಾಳುಗಳು ತಾಳ-ಮದ್ದಳೆಗಳೊಂದಿಗೆ ವಿಠಲನ ಭಜನೆಯಲ್ಲಿ ಮಗ್ನರಾಗಿದ್ದರು. ಎಲ್ಲಿ ನೋಡಿದರಲ್ಲಿ ತಲೆಯ ಮೇಲೊಂದು ಟೋಪಿಯೊಂದಿಗೆ ಶುಭ್ರಶ್ವೇತವಸ್ತ್ರಧಾರಿ ಪುರುಷರು ಹಾಗೂ ತಲೆಯ ಮೇಲೆ ಸೆರಗು ಹೊದ್ದ ಮಹಿಳೆಯರು. ಭಗವನ್ನಾಮಸ್ಮರಣೆಯೊಂದಿಗೆ ದಿಂಡಿಯೆಂದು ಕರೆಯಲ್ಪಡುವ ತಂಡದಲ್ಲಿ ಆಗಮಿಸಿ ವಿಠಲನ ಸಂದರ್ಶಿಸುವ ವಾರ್ಕರಿಗಳು ಇವರು.
ವಿಠಲನ ಕಂಡಿರದ ನಮಗೆ ಆತನ ಕಾಣುವ ಹಂಬಲ. ಈ ಗುಂಪಿನ ನಡುವೆಯೇ ಸೂಚನಾಫಲಕಗಳನ್ನನುಸರಿಸಿ ಮುಖದರ್ಶನಕ್ಕಾಗಿ ತೆರಳಿದೆವು. ಸರತಿಯ ಸಾಲಿನಲ್ಲಿ ಜನವಿರಳವಾಗಿದ್ದರಿಂದ ಇದೇ ವಿಹಿತವೆನಿಸಿತು. ವಿಠೋಬನ ಚರಣಸ್ಪರ್ಶದಿಂದ ಪುನೀತರಾಗುತ್ತಿದ್ದ ಭಕ್ತಗಢಣದ ನಡುವೆ ದೂರದಿಂದ ಕೃಷ್ಣವರ್ಣದ ಮೂರುತಿಯ ಮುಖದ ಕಿಂಚಿದ್ದರುಶನವೇನೋ ಸುಲಭವಾಗಿಯೇ ದೊರೆಯಿತು. ಆದರೆ ಮುಖವನ್ನೂ ಪೂರ್ಣ ಕಣ್ತುಂಬಿಕೊಳ್ಳಲಾಗದೇ ನಿರಾಶೆಯಾಯಿತು. ತ್ರಾಸವಿಲ್ಲದೇ ದರುಶನ ಕೊಡೆ ಎಂಬಂತಿತ್ತು ಪಾಂಡುರಂಗನ ನಡೆ.
ದೂರದಿಂದ ಬಂದ ನಮಗೂ ಮರೀಚಿಕೆಯಂತೆ ಹಾದುಹೋದ ಪಾಂಡುರಂಗನ ಮುಖದರ್ಶನ ಸಾಕೆನಿಸಲಿಲ್ಲ. ಮರುದಿನ ಸರತಿಸಾಲಲ್ಲಿ ನಿಂತು ಪಾಂಡುರಂಗನ ಪಾದಮುಟ್ಟಿ ನಮಿಸೋಣವೆಂದು ನಿರ್ಧರಿಸಿದೆವು. ಮಂದಿರದ ಆವರಣದಲ್ಲಿ ತುಸುಹೊತ್ತು ಕುಳಿತು ವಿಠಲನ ಧ್ಯಾನಿಸಿದೆವು. ಗ್ರಾಮೀಣಭಕ್ತರೇ ಬಹುಸಂಖ್ಯೆಯಲ್ಲಿದ್ದರು. ಅವರ ಭಕ್ತಿ, ತನ್ಮಯತೆ ನಮಗೆ ಹೊಸತು. ಹಲವಾರು ಬಾರಿ ಬಸ್ಕಿ ತೆಗೆದು ಭಗವಂತನನ್ನು ನಮಿಸುವುದು ಶರಣಾಗತಭಾವದಂತಿದ್ದರೆ, ಹೆಂಗಳೆಯರು ಕೈಹಿಡಿದು ವರ್ತುಲಾಕಾರದಲ್ಲಿ ಸುತ್ತುವುದು ಆತ್ಮನಿವೇದನೆಯಂತೆ ಭಾಸವಾಗುತ್ತಿತ್ತು.
ಅಂದು ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳಾದ ಗಯಾದಷ್ಟೇ ಪವಿತ್ರವೆನಿಸಿದ ವಿಷ್ಣುಪಾದ, ಪುರಾಣ-ಇತಿಹಾಸ-ರಾಜಕೀಯದ ಝಲಕನ್ನು ನೀಡುವ ಕೈಕಾಡಿ ಮಹಾರಾಜ ಮಠ, ತುಳಸಿ ವೃಂದಾವನ ಇತ್ಯಾದಿಗಳನ್ನು ನೋಡಿದೆವು. ರಸ್ತೆಯಂಚಿನಲ್ಲಿ ಎಲ್ಲಿ ನೋಡಿದರಲ್ಲಿ ವಿಠಲನ ಭಜನೆ ಮಾಡುತ್ತಾ ದಿಂಡಿಯಲ್ಲಿ ಸಾಲಾಗಿ ಸಾಗುವ ಶ್ವೇತವಸ್ತ್ರಧಾರಿಗಳು, ಇವರನ್ನನುಸರಿಸುವ ಮಹಿಳೆಯರು. ಅಂದ ಹಾಗೆ, ಆಷಾಢ ಏಕಾದಶಿಯಂತೆ ಕಾರ್ತೀಕ ಏಕಾದಶಿಯೂ ಇಲ್ಲಿ ವಿಶೇಷವೆಂದು ನಮಗೆ ಆಗಷ್ಟೇ ತಿಳಿಯಿತು. ತಾಳ-ತಂಬೂರಿ ಅವರ ಕೈಯೊಳಗೆ, ವಿಠಲನ ಭಜನೆ ಅವರೊಂದಿಗೆ ನಮ್ಮ ಮನದಲ್ಲೂ ನಡೆಯುತ್ತಿತ್ತು,
ಚಂದ್ರಭಾಗಾ ನದಿಯ ದಡದ ಪುಂಡಲೀಕನ ಗುಡಿಯನ್ನು ಸಂದರ್ಶಿಸಿದೆವು. ದಡದ ಗುಂಟ ಕಣ್ಣುಹಾಯಿಸಿದಲ್ಲೆಲ್ಲ ಗುಂಪಾಗಿ ಅಡಿಗೆ-ನಿತ್ಯಾಹ್ನೀಕದಲ್ಲಿ ನಿರತ ದಿಂಡಿಯ ಮಂದಿ. ಜನಸಂದಣಿಯೊತ್ತಡವನ್ನು ತಡೆಯಲಾಗದೇ ಪಾಂಡುರಂಗನ ಪದತಲದಲ್ಲಿರುವ ಪವಿತ್ರ ಚಂದ್ರಭಾಗೆ ಮಲಿನಗೊಂಡದ್ದನ್ನು ಕಂಡಾಗ ಪಿಚ್ಚೆನಿಸಿತು. ಸ್ವಚ್ಛತೆಯೂ ದೈವಿಕತೆ ಎಂಬ ತಿಳುವಳಿಕೆಯನ್ನೂ ಪಂಢರೀನಾಥ ಇವರಿಗಿತ್ತರೆ ಎಷ್ಟು ಚೆನ್ನ ಎಂದೆನಿಸದಿರಲಿಲ್ಲ.
ಎಂದಿಗಾವುದೋ ನಿನ್ನ ದರುಶನ ಎಂಬ ಕನವರಿಕೆಯಲಿ ಮರುದಿನ ಮುಂಜಾನೆ ತುಸು ಬೇಗನೇ ಎದ್ದು ತಯಾರಾದೆವು. ನಾಲ್ಕು-ನಾಲ್ಕೂವರೆಯ ಹೊತ್ತಿಗೆ ರಸ್ತೆ ನಿರ್ಜನವಾಗಿತ್ತಾದರೂ, ದೇವಾಲಯದ ಬಳಿ ಅದಾಗಲೇ ಭಕ್ತರ ಸಂತೆಯೇ ನೆರೆದಿತ್ತು. ನಾವೂ ಸರತಿಯ ಸಾಲಿನಲ್ಲಿ ನಿಂತೆವು. ಅದಾಗಲೇ ಸಾಲು ಬಹಳಷ್ಟು ಬೆಳೆದಿತ್ತು. ನಾವು ನೋಡುತಿದ್ದಂತೆ ನಮ್ಮ ಹಿಂದೆ ಮತ್ತಷ್ಟು ಉದ್ದವಾಯಿತು. ಸಾಲಿನಲ್ಲಿ ನಿಂತಂತೆ ಭಜನೆ, ಪಾಂಡುರಂಗನ ಜಯಕಾರಗಳು ಕೇಳುತ್ತಿದ್ದವು. ನಾವೂ ನಿಂತಲ್ಲಿಯೇ ವಿಠಲನನ್ನು ಧ್ಯಾನಿಸಿದೆವು. ಸರತಿಯ ಸಾಲು ಸ್ತಬ್ಧವಾಗಿತ್ತು. ಬಂದದ್ದು ತುಸು ಬೇಗವಾಯಿತು ಎಂದೆನಿಸಿದರೂ, ಆಕ್ಷೇಪವೇನೂ ಇರಲಿಲ್ಲ. ಆಗ ಕಾಕಡಾರಾತಿಯೆಂದು ಕರೆಯುವ ಪಾಂಡುರಂಗನ ಪ್ರಾತಃಕಾಲದ ಪೂಜೆಯ ಹೊತ್ತು. ಭಗವಂತನನ್ನು ನಿದ್ದೆಯಿಂದ ಎಚ್ಚರಿಸುವ ಪ್ರಕ್ರಿಯೆ. ಈ ಪೂಜೆ ಮುಗಿದ ಬಳಿಕ ಸಾಲು ಪಟಪಟನೆ ಚಲಿಸತೊಡಗಿತು. ಉದ್ದಕ್ಕೂ ವಾರ್ಕರಿಗಳ ಜೈಕಾರ. ಮಂಗಳಮೂರ್ತಿಯನ್ನು ಸಮೀಪಿಸುತ್ತಿರುವಂತೆ ಶರಣಾಗತಿಯ ಉತ್ಕಟತೆ. ಅದೋ, ಆ ಶ್ಯಾಮಲಾಕೃತಿ! ಕಟಿಯಲ್ಲಿ ಕರವಿಟ್ಟ ಜಗದೊಡೆಯ! ಆ ಮಂಗಳಾಕೃತಿಯ ಚರಣಸ್ಪರ್ಶಮಾತ್ರದಿಂದ ಸಕಲ ಪಾಪಗಳು ಪರಿಹಾರವಾದವೆಂಬ ಧನ್ಯತಾಭಾವ. ಮುಂದೆಸಲಹುವನೆಂಬ ಗಾಢನಂಬಿಕೆಯಲ್ಲಿ ಮೈಮರೆತಿರುವಾಗ “ಪುಢೆ ಚಲಾ” (ಮುಂದೆ ಹೋಗು) ಎಂಬ ಸಿಬ್ಬಂದಿಯ ಧ್ವನಿ ಎಚ್ಚರಿಸಿತು. ಹಲವರು ಅದಾಗಲೇ ಧನ್ಯತೆಯಿಂದ ಕಣ್ಣೀರಾಗಿದ್ದರು. ಹೊರ ಬಂದು ಅನತಿದೂರದಲ್ಲಿರುವ ರುಖುಮಾಯಿಯದರ್ಶನ ಪಡೆದೆವು. ವಾತ್ಸಲ್ಯಮೂರ್ತಿ ವಿಠೋಬ ಭಕ್ತರಿಗೆ ಮಾತೃಸ್ವರೂಪಿ...ಮಾಊಲೀ... ಅದಕ್ಕೇ ಇರಬೇಕು ಆ ರಾತ್ರಿ ಪಂಢರಪುರದಿಂದ ತೆರಳುವಾಗ ಮನ ಬಹಳ ಹಗುರಾದಂತೆನಿಸಿತು.
ಕಟಿಯಲ್ಲಿ ಕರವಿಟ್ಟನೋ...
-
ಸಾಣೂರು ಇಂದಿರಾ ಆಚಾರ್ಯ