Search This Blog

Friday 10 April 2020

ಧರೆ ಹೊತ್ತಿ ಉರಿದೊಡೆ...




ದೂ
ರದ ಚೀನಾದಲ್ಲಿ ಉದಿಸಿದ ಕೋವಿಡ್-19 ಮಹಾಮಾರಿ ವಿಶ್ವದಾದ್ಯಂತ ಎಗ್ಗಿಲ್ಲದೇ ಪಸರಿಸುತ್ತಿದೆ. ಮಾರಣಹೋಮ ನಡೆಯುತ್ತಿದೆ. ಕಣ್ಣಿಗೆ ಕಾಣದ ಕೊರೋನಾ ವೈರಸ್ ದೇಶ-ದೇಶಗಳನ್ನು ಸ್ತಬ್ಧಗೊಳಿಸುತ್ತಿದೆ. ಎಲ್ಲೆಲ್ಲೂ ಸ್ಮಶಾನ ಮೌನ. ನಿರ್ದಿಷ್ಟ ಔಷಧಿಯಿಲ್ಲದ ಈ ಹೊಸ ಸಾಂಕ್ರಾಮಿಕ ಮಹಾಮಾರಿ ಮನುಕುಲದ ದುರಂತವೇ ಸರಿ.



     ಕೋವಿಡ್ ರೋಗ  ಸೋಂಕುವ ಭಯ ಒಂದೆಡೆಯಾದರೆ, ಇದು ಹುಟ್ಟುಹಾಕುತ್ತಿರುವ ಸಾಮಾಜಿಕ, ಆರ್ಥಿಕ ಅಭದ್ರತೆ ಕ್ಷಣ-ಕ್ಷಣಕ್ಕೂ ಮನುಷ್ಯರನ್ನು ಹರಿದು ತಿನ್ನತೊಡಗಿದೆ.

     ಕೂಳನರಸಿ ಊರುಬಿಟ್ಟು ಬಂದ ವಲಸೆ ಕಾರ್ಮಿಕರು ಇತ್ತ ಕೆಲಸವೂ ಇಲ್ಲದೆ ಅತ್ತ ತಮ್ಮೂರಿಗೆ ಮರಳಲೂ ಆಗದೆ ಅತಂತ್ರರಾಗಿದ್ದಾರೆ. ಸಾರಿಗೆ ವ್ಯವಸ್ಥೆ ಇಲ್ಲದೆ, ಕಾಲ್ನಡಿಗೆಯಲ್ಲೇ ಊರು ತಲುಪಿದರೂ, ಅವರದೇ ಊರಿನ ಜನ ಅವರನ್ನು ಊರೊಳಗೆ ಬಿಟ್ಟುಕೊಳ್ಳುತ್ತಾರೆಂಬ ಭರವಸೆಯಿಲ್ಲ. ಪರವೂರಿನಿಂದ ಬಂದ ಮಂದಿ  ರೋಗವಾಹಕರಿರಬಹುದೆಂಬ  ಭಯ ಸಹಜವೇ.   ಹುಟ್ಟಿ ಬೆಳೆದ ಊರು ವಲಸೆ ಕಾರ್ಮಿಕರಿಗೆ ಇಂದು ಪರಕೀಯವಾಗಿದೆ. ಅವರಲ್ಲಿ ಅನಾಥ ಪ್ರಜ್ಞೆಯನ್ನು ಹುಟ್ಟುಹಾಕಿದೆ. 

     ವಿದೇಶದಲ್ಲಿ ನೆಲೆಸಿರುವವರು ತಾಯ್ನಾಡಿನತ್ತ ಮುಖ ಮಾಡುವಂತಿಲ್ಲ. ಮುನ್ನೆಚ್ಚರಿಕೆಯ ಅಂಗವಾಗಿ ವಾಯುಯಾನ  ಸದ್ಯಕ್ಕೆ ಸ್ಥಗಿತವಾಗಿದೆ.  ಬಂದವರನ್ನು ಜನ ನೋಡುವ ದೃಷ್ಟಿಯೂ ಬದಲಾಗಿದೆ. ಮೊದಲಿನ ಅಪ್ಯಾಯಮಾನತೆ ಇಲ್ಲವಾಗಿದೆ.   ಎಲ್ಲಿ ಪರದೇಶದ ಈ ಸೋಂಕು ತಮಗೆ ಹರಡುತ್ತದೆಯೋ ಎಂದು ಆತಂಕಪಡುತ್ತಿದ್ದಾರೆ. ಬಂಧು-ಮಿತ್ರರು ತಿರುಗಿ ನೋಡುವುದಿಲ್ಲ. ಕಷ್ಟ ಬಂದಾಗ ಮೊದಲು ನೆನಪಾಗುವುದು ತಾಯಿ ಮತ್ತು ತಾಯ್ನೆಲ. ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿರುವ ಇವರಿಗೆ ಈ ಸಂಕಷ್ಟದ ಸಮಯದಲ್ಲಿ ತಾಯ್ನೆಲದತ್ತ ಮುಖಮಾಡದಂತಹ ಪರಿಸ್ಥಿತಿ. ಹಾರಿ ಹೋದ ಹಕ್ಕಿಗಳಿಗೆ ಗೂಡು ಮರೀಚಿಕೆಯಾಗಿದೆ.

     ನಮ್ಮ ಮನೆಯೊಳಗೇ ನಾವು ಬಂಧಿಯಾಗಿರುವಾಗ  ನೆರೆಮನೆ, ಅಜ್ಜಿ ಮನೆಯ ಮಾತೆಲ್ಲಿಯದು?  ನಾವು ಅವರ ಮನೆಯಲ್ಲಿ, ಅವರು ನಮ್ಮ ಮನೆಯಲ್ಲಿ  ಅನಪೇಕ್ಷಿತ ಅತಿಥಿಗಳೇ. ಮಾತಲ್ಲಿ ಹೇಳಲಾರದ್ದನ್ನು ಮುಖಬಾವ ತಿಳಿಸುತ್ತದೆ. ಮನುಷ್ಯ-ಮನುಷ್ಯರ ನಡುವೆ ಅಪನಂಬಿಕೆಯ ಬೇಲಿ ಕಟ್ಟಿದಂತಾಗಿದೆ.
 
     ಕೋವಿಡ್-19 ಅದಾಗಲೇ ನಾವು ಗ್ಲೋಬಲ್ ವಿಲೇಜ್ ಎಂದು ಹೆಮ್ಮೆ ಪಟ್ಟುಕೊಳ್ಳುವ ವಿಶ್ವದಲ್ಲಿ ಲಕ್ಷಕ್ಕೂ ಮಿಕ್ಕಿ ಜೀವಗಳನ್ನು ಬಲಿತೆಗೆದುಕೊಂಡಿದೆ. ಸೋಂಕಿತರೆಂದು ಚಿಕಿತ್ಸೆ ಪಡೆಯುತ್ತಿರುವ ಮತ್ತು ಶಂಕಿತರೆಂದು ನಿಗಾದಲ್ಲಿರುವ ಜನರ ಸಂಖ್ಯೆ ಇದಕ್ಕಿಂತಲೂ ಹಲವು ಪಟ್ಟು ದೊಡ್ಡದಿದೆ. ಮುಂದುವರಿದ ದೇಶಗಳನ್ನೂ ಬಿಡದೆ ಕಾಡ್ಗಿಚ್ಚಿನಂತೆ ರೋಗ ಪಸರಿಸತೊಡಗಿದೆ. ಮಾರಣಹೋಮ ಯಾವ ಪರಿಯಲ್ಲಿದೆಯೆಂದರೆ ಹಲವೆಡೆ ಸಾಮೂಹಿಕ ಅಂತ್ಯಸಂಸ್ಕಾರಗಳೇ ನಡೆದಿವೆ. ಈ ವಿನೂತನ ಬಾಧೆಯೊಂದು ವಿಚಿತ್ರ. ಹರಡುವ ಅಪಾಯವಿದೆಯಾದ್ದರಿಂದ  ತಮ್ಮವರು ರೋಗಬಾಧೆಯಿಂದ ನರಳುತ್ತಿರುವಾಗ ಆರೈಕೆ ಮಾಡಲಾಗದ, ಸಂತೈಸಲಾಗದ ಅಸಹಾಯಕತೆ. ಪ್ರೀತಿ ಪಾತ್ರರ ಸಾವಿನ ಬಳಿಕವೂ ಅಂತಿಮ ದರ್ಶನ ಮಾಡಲಾಗದ ದಯನೀಯ ಪರಿಸ್ಥಿತಿಯಲ್ಲಿ ನಾವಿದ್ದೇವೆ.

    ವಿದೇಶದಲ್ಲೋ, ಪರವೂರಿನಲ್ಲೋ ಮಕ್ಕಳು ಬದುಕು ಕಟ್ಟಿಕೊಂಡು ಹಾಯಾಗಿದ್ದಾರೆಂದು ನೆಮ್ಮದಿಯಿಂದಿದ್ದ ಮುದಿಜೀವಗಳಿಗೀಗ ತಳಮಳ. ಊರಿನಲ್ಲಿರುವ ತಮಗೇನಾದರೂ ಆದರೆ  ಮಕ್ಕಳು ಬರುವಂತಿಲ್ಲವೆಂಬ ಆತಂಕದಲ್ಲಿ ಮನೆಯೊಳಗೆ ಕುಳಿತು ಕುಸಿಯುತ್ತಿದ್ದಾರೆ.

     ಸದ್ಯಕ್ಕೆ ಮನೆಯಿಂದಲೇ ಕಛೇರಿ ಕೆಲಸಗಳನ್ನು ನಿರ್ವಹಿಸುವ ಒಂದು ವರ್ಗ ತುಸು ನಿರಾಳವಾಗಿದೆ. ದಿನಕಳೆದಂತೆ ಒಂದೊಮ್ಮೆ ಉದ್ಯೋಗದಾತ ಸಂಸ್ಠೆಯೇ ಈ ಆರ್ಥಿಕ ಹೊಡೆತದಿಂದ ತತ್ತರಿಸಿ ಮುಚ್ಚಿಹೋದರೆ ಎಂಬ ಆತಂಕವೂ ಸಣ್ಣಗೆ ಮೊಳೆಯತೊಡಗಿದೆ. ವೇತನ ಕಡಿತದ ಸುದ್ದಿಗಳು ಈಗಾಗಲೇ ಹರಿದಾಡತೊಡಗಿವೆ. ಹಾಗಾದರೆ ಸಾಲದ ಕಂತುಗಳನ್ನು ಭರಿಸುವುದೆಂತು? ಕನಸಿನ ಗೋಪುರಗಳು ಮೆಲ್ಲನೆ ಕುಸಿಯತೊಡಗಿವೆ.

   ವಾರಗಟ್ಟಲೆ ಮನೆಯೊಳಗೆ ಇರಬೇಕಾಗಿ ಬಂದಾಗ ಕೊಂಚ ಖಿನ್ನತೆಗೊಳಗಾಗುವುದು ಸಹಜ. ಸಾಮಾಜಿಕ ಮಾಧ್ಯಮಗಳಲ್ಲಿ ಸತ್ಯದ ಜೊತೆಗೆ ಸುಳ್ಳು ಸುದ್ದಿಗಳೂ ಹರಿದು ಬಂದು ಮತ್ತಷ್ಟು ಅನಿಶ್ಚಿತತೆ ಕಾಡಿ ಇದು ಜಗದ ಕೊನೆಯೇನೋ ಎಂಬ ಭಾವ ಆವರಿಸತೊಡಗಿದೆ. ಖಾಲಿ ತಲೆ ಸೈತಾನನ ನೆಲೆಯಾಗಿದೆ.

     ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಶಕರಿಗೆ ಜೀವವೇ ಒತ್ತೆಯಿಟ್ಟಂತೆ. ಸುರಕ್ಷತಾ ಕ್ರಮಗಳಿದ್ದರೂ ಯಾವ ಕ್ಷಣವಾದರೂ, ವೈರಸ್ ಅಂಟುವ ಅಪಾಯ.  ಇಂತಹ ಜೀವರಕ್ಷಕ ಕಾಯಕದಲ್ಲಿ ಹಗಲಿರುಳೆನ್ನದೇ ನಿರತರಾಗಿರುವವರನ್ನು ನೆರೆಯವರು ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಮನೆಯಿತ್ತವರು ನಿರ್ದಾಕ್ಷಿಣ್ಯವಾಗಿ ಮನೆ ಬಿಡುವಂತೆ ಒತ್ತಾಯ ಹೇರುತ್ತಿದ್ದಾರೆ. ಜನ ಏಕೆ ಮಾನವೀಯತೆ ಮರೆಯುತ್ತಿದ್ದಾರೆ?

     ಹಲವಾರು ಕ್ರಮಗಳು ವೇಗವಾಗಿ ಹಬ್ಬುತ್ತಿರುವ ಕೊರೋನಾ ಪೆಡಂಭೂತಕ್ಕೆ ಕಡಿವಾಣ ಹಾಕಲು ಅವಶ್ಯವೇ ಆಗಿದ್ದರೂ, ಆರ್ಥಿಕತೆ, ಸಾಮಾಜಿಕ ಸಂಬಂಧಗಳು ಸ್ಥಿತ್ಯಂತರಗೊಳ್ಳುತ್ತಿವೆಯೋ ಎಂದನಿಸುತ್ತಿದೆ. ಜಗತ್ತೇ ಈ ಹೊತ್ತು ಹತ್ತಾಶೆ, ಅನಿಶ್ಚಿತತೆಗಳ ಗೂಡಾಗಿದೆ. ಧರೆ ಹೊತ್ತಿ ಉರಿಯುತಿದೆ.  ಛೇ...ಮನುಕುಲಕ್ಕೇಕೀ ಪರಿಯ ಶಾಪ?
 -      ಸಾಣೂರು ಇಂದಿರಾ ಆಚಾರ್ಯ



No comments:

Post a Comment