
ದ್ಯ ಮತ್ತು ರೋಗಿಯ ಪವಿತ್ರ ಸಂಬಂಧಕ್ಕೆ ಹುಳಿ ಹಿಂಡುತ್ತಿದೆ ಇತ್ತೀಚಿನ ವರ್ಷಗಳಲ್ಲಿ ಹೊಸ "ರೋಗ"ವೊಂದು. ಈಡಿಯೆಟ್ ಸಿಂಡ್ರೋಮ್ ಎಂದು
ಕರೆಯಲ್ಪಡುವ ಈ ರೋಗ ಪರಸ್ಪರ ನಂಬಿಕೆಯನ್ನೇ ಶಿಥಿಲಗೊಳಿಸುತ್ತಾ ಸಾಗುತ್ತಿದೆ. Internet Derived Information Obstructing
Treament (IDIOT) ಇದರ ಸಂಕ್ಷಿಪ್ತ ರೂಪವಾಗಿರುವ ಇದು ಚಿಕಿತ್ಸೆ-ಪ್ರತಿರೋಧಕ ಅಂತರ್ಜಾಲಜನಿತ ಮಾಹಿತಿ
ಖಾಯಿಲೆ. ಹೆಸರೇ ಹೇಳುವಂತೆ, ಹಲವಾರು ಬಾರಿ ಮೂರ್ಖತನದ ಪರಮಾವಧಿಯೂ ಹೌದು.
ಇಂದು ನೀವು ನಿಮಗಿರುವ ಸಣ್ಣದೋ, ದೊಡ್ಡದೋ ಅನಾರೋಗ್ಯವನ್ನು ನಾಲ್ಕು ಮಂದಿಯ ಮುಂದೆ ಹೇಳಿದಿರೆಂದಾದರೆ,
ಹತ್ತು ಹಲವಾರು ಉಪಶಮನ ಕ್ರಮಗಳು ಸೂಚಿಸಲ್ಪಡುತ್ತವೆ. ಹೀಗಿರುವಾಗ ಎಲ್ಲರ ಅಭಿಪ್ರಾಯ, ಅನಿಸಿಕೆಗಳ ಮುಕ್ತವೇದಿಕೆ ಅಂತರ್ಜಾಲಮಾಧ್ಯಮದಲ್ಲಿ ಮಾಹಿತಿಗಳಿಗೇನು
ಕೊರತೆ? ಸತ್ಯವೋ, ಸುಳ್ಳೋ, ಅಗತ್ಯವೋ, ಅನಗತ್ಯವೋ ಅಂತೂ ಎಲ್ಲಾ ಬಗೆಯ ಮಾಹಿತಿಗಳು ದೊರಕುತ್ತವೆ.
ಮಾಹಿತಿಯೆನ್ನುವುದು ಇಂದು ಬೆರಳ ತುದಿಯಲ್ಲಿಯೇ ಇದೆ. ಸಣ್ಣಗಿನ ಒಂದು ಕೆಮ್ಮಿನಷ್ಟು ಆರೋಗ್ಯದಲ್ಲಿ ಕಿಂಚಿತ್ ಬದಲಾವಣೆಯಾದರೂ ಅಂತರ್ಜಾಲದಲ್ಲಿ
ಮಾಹಿತಿಗಾಗಿ ತಡಕಾಡುತ್ತೇವೆ. ರೋಗ ನಿದಾನದಿಂದ ಹಿಡಿದು ಉಪಶಮನ-ಪರಿಹಾರೋಪಕ್ರಮಗಳ ಮಾಹಿತಿಯ
ಕಣಜವೇ ಥಟ್ಟನೆ ತೆರೆದುಕೊಳ್ಳುತ್ತದೆ. ಅದರ ಸತ್ಯಾಸತ್ಯತೆ, ಮಾಹಿತಿಯ ಮೂಲಗಳನ್ನು ಪರೀಕ್ಷಿಸುವ ಗೋಜಿಗೆ ಹೋಗದೇ,
ತಮಗ್ಯಾವುದೋ ಗಂಭೀರ ರೋಗವಿದೆಯೆಂದು ಆತಂಕಗೊಳ್ಳುವ ಜನ ಬಹಳ. ವೈದ್ಯರನ್ನು ಸಂಪರ್ಕಿಸದೆ, ರೋಗದ ಬಗ್ಗೆ "ಸಂಶೋಧನೆ" ನಡೆಸಿ ಸ್ವಯಂಚಿಕಿತ್ಸೆಯಲ್ಲಿ
ತೊಡಗಿಕೊಳ್ಳುತ್ತಾರೆ. ಜಾಹಿರಾತುಗಳಿಗೆ ಮರುಳಾಗಿ ಆನ್‍ಲೈನಲ್ಲಿ ಸಿಗುವ ಕಳಪೆ ಔಷಧಿಗಳನ್ನು ಸೇವಿಸುತ್ತಾರೆ.
ಅನಾವಶ್ಯಕ ಆತಂಕ, ಖಿನ್ನತೆ ಹಾಗೂ ಅನಗತ್ಯ ಔಷಧಗಳ ಸೇವೆನೆಯಿಂದ ಇನ್ಯಾವುದೋ ಖಾಯಿಲೆಗಳು ಬರುವ ಸಾಧ್ಯತೆಯೂ
ಇಲ್ಲದ್ದಿಲ್ಲ.
ಹಲವು ರೋಗಳ ಹಲವು ಲಕ್ಷಣಗಳು ಒಂದೇ ಇರುತ್ತವೆ. ಲಕ್ಷಣಗಳು ಸಮನಾಗಿದ್ದರೂ, ರೋಗ ಬೇರೆಯಿರಬಹುದು. ಜೊತೆಗೆ ರೋಗ ಒಂದೆಯಾಗಿದ್ದರೂ ಪ್ರತಿಯೊಬ್ಬ
ರೋಗಿಯು ವಿಭಿನ್ನ. ಹಾಗಾಗಿ ವೈದ್ಯರೊಂದಿಗೆ ನಿಷ್ಕರ್ಷಿಸದೇ ಯಾವೊಂದು ರೋಗವನ್ನು ಅಥವಾ ಚಿಕಿತ್ಸೆಯನ್ನು
ನಿರ್ಧರಿಸಲಾಗದು.
ಹಲವೊಮ್ಮೆ ನಿಜವಾಗಿಯೂ ದೊಡ್ಡ ಅನಾರೋಗ್ಯ ಕಾಡುತ್ತಿದ್ದರೂ, ಅಂತರ್ಜಾಲಮಾಧ್ಯಮದ ಹುಸಿಭರವಸೆಯಿಂದ ಚಿಕಿತ್ಸೆ ಪಡೆಯುವ
ಗೋಜಿಗೆ ಹೋಗದೆ, ಖಾಯಿಲೆ ಉಲ್ಬಣವಾಗಲೂಬಹುದು. ಮಾಹಿತಿಗಳು ಬಹಳಷ್ಟು ರಮಣೀಯವಾಗಿ
ಕೆಲವೊಮ್ಮೆ ದಾರಿ ತಪ್ಪಿಸಿಬಿಡುತ್ತವೆ.
ಅಂತರ್ಜಾಲದ ವ್ಯಾಪ್ತಿ ಹೆಚ್ಚಾದಷ್ಟು ಈ ಈಡಿಯೆಟ್ ಸಿಂಡ್ರೋಮ್ ವ್ಯಾಪಕವಾಗಿ ಹರಡುತ್ತಿದೆ. ವಿಶೇಷವೆಂದರೆ ಇದು ವಿದ್ಯಾವಂತರನ್ನೇ ಹೆಚ್ಚು ಬಾಧಿಸುತ್ತದೆ.
ವೈದ್ಯರು ನೀಡಿದ ಔಷಧ, ಅವುಗಳ ಪಾರ್ಶ್ವಪರಿಣಾಮಗಳ ಬಗ್ಗೆ ತಮ್ಮದೇ ನಿಲುವಿಗೆ ಬಂದು, ಚಿಕಿತ್ಸೆ
ನಿರಾಕರಿಸುತ್ತಾರೆ ಇಲ್ಲವೇ ಹಠಾತ್ ನಿಲ್ಲಿಸಿಬಿಡುತ್ತಾರೆ. ವೈದ್ಯರು ಹೇಳುವುದೆಲ್ಲ ಸುಳ್ಳು ಎಂಬ
ಅಪನಂಬಿಕೆಯಿಂದ ಜೀವಕ್ಕೆ ಕುತ್ತು ಬಂದರೂ ಬರಬಹುದು.
ವಿಶ್ವ ಆರೋಗ್ಯ ಸಂಸ್ಥೆ ಇದನ್ನು
ಇನ್ಫ಼ೊಡೆಮಿಕ್, ಅಂದರೆ ಮಾಹಿತಿ ಪಿಡುಗು ಎಂದು ಕರೆದಿದೆ. ಸತ್ಯವಾದ ಮತ್ತು ಮಿಥ್ಯವಾದ ಆರೋಗ್ಯ-ಸಂಬಂಧೀ ಅಮಿತ ಮಾಹಿತಿಯಿಂದಾಗಿ
ಚಿಕಿತ್ಸೆಯ ಬಗ್ಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲವಾಗುವುದೆಂದರ್ಥ.
ರೋಗದ ಬಗ್ಗೆ ತಿಳಿದಿರುವುದು
ಅಪೇಕ್ಷಣೀಯವೇ ಆದರೂ, ಆ ತಿಳುವಳಿಕೆ ಚಿಕಿತ್ಸೆಯ ಬಗ್ಗೆ ಮೂಗು
ತೂರಿಸುವಷ್ಟು ಮುಂದುವರಿಯಬಾರದು. ವಿಪರ್ಯಾಸವೆಂದರೆ
ಹಿಂದೆ ಮಾಹಿತಿಯ ಅಲಭ್ಯತೆಯಿಂದಾಗಿ ಚಿಕಿತ್ಸೆಗೆ ಬರುವವರು ಕಮ್ಮಿಯಿದ್ದರೆ, ಈಗ ಮಾಹಿತಿಯ ಅತಿಲಭ್ಯತೆಯಿಂದ ಚಿಕಿತ್ಸೆ ಪಡೆಯಲು ಹಿಂಜರಿಯುವವರು ಬಹಳಷ್ಟಿದ್ದಾರೆ. ಈಡಿಯೆಟ್
ಸಿಂಡ್ರೋಮ್ ಕಗ್ಗಂಟನ್ನು ನಿವಾರಿಸಿ ಚಿಕಿತ್ಸೆ ನೀಡುವುದು ಇಂದಿನ ವೈದ್ಯರಿಗೊಂದು ಸವಾಲೇ ಸರಿ.
- ಸಾಣೂರು
ಇಂದಿರಾ ಆಚಾರ್ಯ
Nice writeup
ReplyDelete