Search This Blog

Monday 24 October 2016

Social media mania



’ಏನ್ವಿಶೇಷ’ ಹೇಳಿ

ರದಲ್ಲಿ ಮೊಬೈಲಿರಲು, ಕರಾಗ್ರದಲ್ಲಿ ಸ್ನೇಹಿತರಿರಲು,  ಪಕ್ಕದ್ಮನೆಯ ಪಲ್ಲವಿಯ ಹಂಗೆನಿತಿಲ್ಲ ಇಂದೆನಗೆ.    ಅದೇನು ಹಮ್ಮು  ಪಲ್ಲವಿಗೆ. ನಾನೇನು ಅವಳಿಗೆ ನಿತ್ಯ ಬೇಳೆ, ಸಕ್ಕರೆ, ಉಪ್ಪಿಗಾಗಿ  ಎಡತಾಕುತ್ತೇನೆಯೇ? ಪತಿ-ಮಕ್ಕಳನ್ನು ಬೆಳಿಗ್ಗೆ ಸಾಗ ಹಾಕಿ, ಒಮ್ಮೆಯ ಮನೆಗೆಲಸ ಮುಗಿಸಿ, ಏನೋ ಸ್ವಲ್ಪ ಯೋಗ-ಕ್ಷೇಮ ವಿಚಾರಿಸಲು ಹೋದರೆ, ಮನಸಿದ್ದರೆ ಮಾತು, ಇಲ್ಲದಿದ್ದರೆ ಕಂಡೂ ಕಾಣದಂತೆ ಹೋಗಿಬಿಡುತ್ತಿದ್ದಳು. 

     ಇರಲಿ ಬಿಡಿ, ನಾನೀಗ ಆಕೆಯ ಮುಖ ನೋಡಿ ಅದೆಷ್ಟು ದಿನವಾಯ್ತೋ? ಅವಳೇ ಅಪರೂಪಕ್ಕೆ ಹಣಕಿ ಹಾಕಿದರೂ ನಾನೀಗ ಬಹಳ ಬಿಜ಼ಿ.  ಅಲ್ಲಲ್ಲಿ ಚದುರಿದ ಸ್ನೇಹಿತರ ಬಳಗವೇ ವಾಟ್ಸಪ್ ಎಂಬ ಪಂಚಾತಿಕೆ ಕಟ್ಟೆಯಲ್ಲಿ ಕುಳಿತಿರುತ್ತಾರೆ. ನನ್ನ ಮನೆಯಲ್ಲಿಯೇ ಕುಳಿತು ಹರಟೆ ಹೊಡೆಯುವ ಸ್ವಾತಂತ್ರ್ಯ.
ಹರಟೆಯೆಂದರೆ ಮಾಮೂಲಿ ಕಾಲಹರಣವಲ್ಲ. ಅದೆಷ್ಟು ಜೊಕುಗಳು, ಅದೆಷ್ಟು ಚಿತ್ರಗಳು, ಅದೆಷ್ಟು ಮಾಹಿತಿಗಳು. ನಾನೀಗ ಹೊಸದಾಗಿ ಖರೀದಿಸಿದ ಉಡುಗೆಯನ್ನೋ, ಸೀರೆಯನ್ನೋ ಧರಿಸಿ ಅಭಿಪ್ರಾಯಕ್ಕಾಗಿ ಪತಿಮಹಾಶಯರೆದುರು ಪರೇಡ್ ನಡೆಸಬೇಕಾಗಿಲ್ಲ. ಒಂದು ಫೋಟೋ ತೆಗೆದು ಫ಼ೇಸ್ಬುಕ್ ಇಲ್ಲವೇ ವಾಟ್ಸಪ್‍ನಲ್ಲಿ ಹಾಕಿದರೆ ಅದೆಷ್ಟು ಮೆಚ್ಚುಗೆಗಳು, ಅಭಿಪ್ರಾಯಗಳು. ಇಂತಹ ತರಹೇವಾರಿ ಅನಿಸಿಕೆಗಳ ನಡುವೆ, ನಾನೊಂದು ಡ್ರೆಸ್ಸ್ ಖರೀದಿಸಿದರೆ, ಕಿಸೆಗೆ ಕನ್ನ ಬಿತ್ತೆಂದು ಕೊರಗಿ ಅಳೆದೂ ಸುರಿದೂ ಒಂದು ಶಬ್ದವನ್ನು ಉಸುರುವ ಗಂಡನ ಅಭಿಪ್ರಾಯವೇಕೆ ಬೇಕು ಹೇಳಿ? ಫ಼ೇಸ್ಬುಕ್ಕಿನ ಗೋಡೆಗಳನ್ನು ಫೋಟೋ, ನುಡಿಮುತ್ತುಗಳಿಂದ ಅಲಂಕರಿಸಿದಾಗ, ಬರುವ ಮೆಚ್ಚಿಗೆಗಳೆಷ್ಟು?  ಮಾತೆನಿದ್ದರೂ ಮೊಬೈಲೆಂಬ ಮೋಹಿನಿಯನ್ನು ಮುಟ್ಟಿ-ತಟ್ಟಿಯೇ ನಡೆಯುತ್ತದೆ. ಮಾತು ಮರೆಯಬಾರದೆಂಬ ಎಚ್ಚರಿಕೆಯೆಂದ ಆಗೊಮ್ಮೆ ಈಗೊಮ್ಮೆ ಧ್ವನಿ ಸಂದೇಶ ರವಾನೆ. 

     ಈ ಫೇಸ್ಬುಕ್ಕಿನವರು ಸ್ನೇಹಹಸ್ತ ಚಾಚಿರುವ ಭಾವೀ ಗೆಳೆಯರ ಹಾಗೂ  ತಿಳಿದಿರಬಹುದಾದ (ಮರೆತಿರುವ?) ಗೆಳೆಯರ ಬಗ್ಗೆ ತಿಳಿಸಿ ಮಹದುಪಕಾರ ಮಾಡುತ್ತಾರೆ.  ಆಗೆಲ್ಲ ಅವರು ಎಲ್ಲಿ, ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಕೆಟ್ಟ ಕುತೂಹಲ ನೋಡಿ.

     ಈ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿಬಿದ್ದು ಚಡಪಡಿಸುತ್ತಿದ್ದಾಗ, ಹಲವಾರು ಬಾರಿ ಒಲೆಯ ಮೇಲಿಟ್ಟಿದ್ದ ಹಾಲು ಉಕ್ಕೇರಿ ಹರಿದು ನೆಲದ ಮೇಲೆಲ್ಲ ಚೆಲ್ಲಿದ್ದೂ ಇದೆ. ಹಾಲು ಉಕ್ಕಿದರೆ ಒಳ್ಳೆಯದೆಂಬ ನಂಬಿಕೆಯಲ್ಲಿ, ಅದೇನು ಮಹಾ ಎಂದು ಎಷ್ಟೋ ಬಾರಿ ನಿರಾಳವಾಗಿದ್ದೇನೆ.

     ಭವ್ಯ ದೃಶ್ಯಗಳನ್ನು ಅಥವಾ ವಿಶೇಷ ಘಟನೆಗಳನ್ನು  ಕಣ್ತುಂಬಿಸಿ, ಮನತುಂಬಿಸಿಕೊಳ್ಳುವುದು ನನಗೀಗ ಮರತೇ ಹೋಗಿದೆಯೆನೋ ಎಂಬ ಗೊಂದಲ ಸಣ್ಣದಾಗಿ ಕಾಡಹತ್ತಿದೆ.  ನಾನೇನು ನೋಡುವುದಿದ್ದರೂ ನನ್ನ ಮೊಬೈಲ್ ಕಣ್ಣುಗಳಿಂದಲೇ. ಕಣ್ತುಂಬಿಸಿಕೊಂಡರೆ ನನಗೆ ಮಾತ್ರ, ಮೊಬೈಲ್ ತುಂಬಿಸಿದರೆ ನನ್ನ ಸ್ನೇಹಿತರ ಗಡಣಕ್ಕೆ ತೋರಿಸಬಹುದೆಂಬ  ದೂರಾಲೋಚನೆ.

     ಮೊನ್ನೆ ನಮ್ಮೂರ ಜಾತ್ರೆಗೆ ಹೋಗಿದ್ದೆ. ಕೈಮುಗಿದು ಭಗವಂತನ ಬಿಂಬವನ್ನು ಮನದುಂಬಿಸುವ ಬದಲು ನನಗರಿವಿಲ್ಲದೆಯೇ, ನನ್ನ ಮೊಬೈಲ್ ಎತ್ತಿ ಹಿಡಿದೆ. ಮೊಬೈಲ್ ಪರದೆಯ ಮೇಲೆಯೇ ಹೃದಯ ಮಂದಿರದಲ್ಲಿ ಇರಿಸಬಹುದಾದ ದೇವರನ್ನು ಸೆರೆ ಹಿಡಿದೆ.  ನನ್ನ ಹೃದಯ  ಬಗೆದು ತೋರಿಸಿದರೂ, ನನ್ನ ಗೆಳೆಯರಿಗೆ ಆ ಭಗವಂತ ಕಾಣಲಾರ, ಆದರೆ ಮೊಬೈಲ್ ಪರದೆ ಮೇಲೆಯೇ ಆತನ ಬಿಂಬವನ್ನು ತೇಲಿಬಿಡಬಹುದಲ್ಲವೇ?  ಹಾಗೆಯೇ, ಇತ್ತೀಚೆಗೆ ಫಲಪುಷ್ಪ ಪ್ರದರ್ಶನಕ್ಕೆ ಹೋದಾಗಲೂ, ಅದರ ಅಂದವನ್ನು ಆನಂದಿಸುವ ವ್ಯವಧನಾವಿರಲಿಲ್ಲ. ಏನಿದ್ದರೂ ಮೊಬೈಲ್ ಕಣ್ಣಿನಿಂದಲೇ ಆಸ್ವಾದನೆ. ನನ್ನ ಭೇಟಿಯ ಸಾಕ್ಷಿಗಾಗಿ ಹೋದ ಕಡೆಯೆಲ್ಲ, ಫೋಟೋ ತೆಗೆಸಿಕೊಳ್ಳುವಾಸೆ. ಘನ ವ್ಯಕ್ತಿಗಳೊಂದಿಗೆ, ವಿಶೇಷ ಸ್ಥಳಗಳಲ್ಲಿ ಸೆಲ್ಫ಼ಿ. ನಾನು ಎಲ್ಲಿ, ಯಾವಾಗ, ಯಾರೊಂದಿಗೆ ಇದ್ದೆ ಎಂಬುದನ್ನು ಪುರಾವೆ ಸಹಿತ ಕ್ಷಣ-ಕ್ಷಣಕ್ಕೂ ತಿಳಿಸುವ ಹುಮ್ಮಸ್ಸು.  ನನ್ನ ಹರಟೆ ಕೂಟದ  ಅಭಿಪ್ರಾಯ ಕೇಳುವಾಸೆ.

     ಇನ್ನು ಮದುವೆ ಮನೆಗಳಿಗೆ ಹೋದರೆ, ಧಾರೆ, ಮಾಂಗಲ್ಯಧಾರಣೆಯಾಗುವಾಗ, ಮದುಮಕ್ಕಳು ಕಾಣಿಸುವುದೇ ಇಲ್ಲ. ಮಂಟಪದ ಸುತ್ತ ಪುಟಗೋಸಿ ಮೊಬೈಲ್ ಫೊಟೊಗ್ರಾಫ಼ರರು ಇರುವೆಗಳಂತೆ ಮುತ್ತಿರುತ್ತಾರೆ. ನನಗೆ ಮೊದಲೆಲ್ಲ ಇದು ಅತಿಯಾಯಿತೆಂದೆನಿಸಿದರೂ, ಯಾವಾಗ ವಾಟ್ಸಪ್, ಫ಼ೇಸ್ಬುಕ್ಕುಗಳಲ್ಲಿ ವ್ಯಸ್ತವಾದೆನೋ, ನಾನೂ ಈಗೀಗ  ಅವರೆಡೆಯಲ್ಲಿ ತೂರಿ ಫೋಟೋ ಕ್ಲಿಕ್ಕಿಸುತ್ತೇನೆ.

     ವಿಶೇಷವೆಂದರೆ, ಮನೆಯೊಳಗೆ ಅಷ್ಟೇನೂ ಸ್ನೇಹ ತೊರಿಸದ ನನ್ನ ಗಂಡ ಮಕ್ಕಳೂ ಫ಼ೇಸ್ಬುಕ್ಕಿನ್ನಲ್ಲಿ ನನ್ನ ಮಿತ್ರರು. ಹೇಗಿದೆ ಮೋಡಿ ನೋಡಿ. ನಮ್ಮನಮ್ಮಲ್ಲಿಯ ಕೆಲವು ಸುದ್ದಿಗಳು ಸ್ಫೋಟಗೊಳ್ಳುವುದು ಈ ಮುಖವಾಣಿಯ ಪುಟಗಳಲ್ಲೇ !

     ಈ ತಿಂಡಿ-ಅಡುಗೆಗಳ  ಭರಾಟೆಯಲ್ಲಿ, ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ನೀವೇ ಹೇಳಿ. ಅದಕ್ಕಾಗಿ ಸಮಸ್ತ ಗೆಳೆಯರ ಬಳಗಕ್ಕೊಂದು ಶುಭ ಮುಂಜಾನೆಯ ಸಂದೇಶವನ್ನು ರವಾನಿಸುತ್ತೇನೆ. ನನಗೆ ಬರುವ ಶುಭ ಸುಪ್ರಭಾತ ಸಂದೇಶಗಳಿಗೂ ಬರವಿಲ್ಲವೆನ್ನಿ. ಮತ್ತೆ ದಿನದ ಕೊನೆಗೆ ಶುಭ ರಾತ್ರಿಯೆಂದರಾಯಿತು. ಆದರೂ ಮತ್ತಿನ್ನೇನು ಸಂದೇಶಗಳು ಬಂದಿರಬಹುದೆಂಬ ಕುತೂಹಲದದಿಂದ ಮತ್ತೊಮ್ಮೆ ಇಣುಕಿ ಅ ದಿನದ ಮಟ್ಟಿಗೆ ಮಿತ್ರರಿಗೆ ವಿದಾಯ ಕೋರುತ್ತೇನೆ.

     ಅಂದ ಹಾಗೆ,  ನನ್ನ ಫ಼ೇಸ್ಬುಕ್ಕಿನ ನೂರಾರು ಗೆಳೆಯರಲ್ಲಿ ಒಬ್ಬಳಾದ ಧನ್ಯ,  ಇತ್ತೀಚೆಗೆ ಮುಖಾಮುಖಿಯಾದಾಗ, ಸ್ನೇಹಿತೆಯೆಂಬ ಕಳಕಳಿಯನ್ನು ಕಿಂಚಿತ್ತೂ ತೊರದೆ ಹತ್ತರಲ್ಲಿ ಹನ್ನೊಂದನೆಯವಳಂತೆ   ನನ್ನೊಡನೆ ವರ್ತಿಸಿದಾಗ ತುಸು ಪಿಚ್ಚೆನಿಸಿತು. ಅದಕ್ಕಾಗಿಯೇ ಪಲ್ಲವಿ ಎದುರು ಸಿಕ್ಕಿದಾಗ ತುಟಿಯಂಚಿನಲ್ಲಿ  ಸಣ್ಣ ನಗುಬೀರುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಯಾಕಂದ್ರೆ ನನ್ನ ತುರ್ತಿಗೇನಾದರೂ ಕೂಡಲೆ ಒದಗುವವಳು ಅವಳೆನ್ನುವ ಸತ್ಯವನ್ನು ಸ್ನೇಹಿತರ ಪ್ರಪಂಚದಲ್ಲಿ ಮುಳುಗಿ ಹೋಗಿದ್ದರೂ ನಾನಿನ್ನೂ ಮರೆತಿಲ್ಲ. 


P.S. : The write-up was published in Udayavani on 01.03.2015

No comments:

Post a Comment