Search This Blog

Tuesday 27 November 2018

ಎಲ್ಲಿ ಸಲ್ಲುವರಯ್ಯ ಇವರು?


ನ್ನಡದ ಜಾಲ ಪುಟಗಳನ್ನೊಮ್ಮೆ ಜಾಲಾಡಿಸಿ ನೋಡಿ. ವೃತ್ತಿಪರರು ಒಂದೆಡೆಯಾದರೆ, ಪ್ರವೃತ್ತಿಯಾಗಿ ಬರೆಯುತ್ತಿರುವವರ ದೊಡ್ಡ ಬಳಗವೇ ಇದೆ.  ತಟ್ಟನೆ ಕಣ್ಮನ ಸೆಳೆದು ಓದುವಂತೆ ಪ್ರೇರೇಪಿಸುವ ವಿಭಿನ್ನ ಹೆಸರಿನ ಬ್ಲಾಗ್‍ಗಳು. ಇತರ ಲೇಖನಗಳಿಗೆನಿತೂ ಕಡಿಮೆಯಿರದ ವಿಭಿನ್ನ ಶೈಲಿಯ ಬರಹಗಳು. ಇವರ ಶೈಕ್ಷಣಿಕ, ಔದ್ಯೋಗಿಕ ಜಾತಕಗಳನ್ನು ಬಿಚ್ಚಿದರೆ ಬಹುಪಾಲು ಜನರು ಖಂಡಾಂತರಗಳನ್ನು ದಾಟಿದ ಟೆಕ್ಕಿಗಳೇ. ಹೊಟ್ಟೆಹೊರೆಯಲು ಐದಂಕೆ ಮೀರಿದ ಸಂಬಳ ತರುವ ಉದ್ಯೋಗವಿದೆ. ಇವರೆಲ್ಲ ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಹುದ್ದೆಗೇರಿದವರು. ಇಂದು ಇಂಗ್ಲಿಷನ್ನೂ ಎಗ್ಗಿಲ್ಲದೇ ಮಾತಾಡಬಲ್ಲರು.  ಆದರೆ ದೇಶ-ವಿದೇಶಗಳನ್ನು ಸುತ್ತಿದ ಅನುಭವ, ಅನುಭವಗಳಿಂದ ಕಲಿತ ಪಾಠ, ಭಾವನೆ ಇತ್ಯಾದಿಗಳನ್ನು ವ್ಯಕ್ತಪಡಿಸಲು ಕನ್ನಡವೇ ಬೇಕು.   ಇಂಗ್ಲಿಷ್ ಹೊಟ್ಟೆಗಾದರೆ, ಕನ್ನಡ ಹೃದಯಕ್ಕೆ ತಂಪನ್ನೆರೆಯಲು.

ಆದರೆ ಈ ಬೆಳವಣಿಗೆ ಇನ್ನು ಹಲವು ವರ್ಷಗಳ ಬಳಿಕ ಕಾಣಸಿಗಲಿಕ್ಕಿಲ್ಲ. ಆಂಗ್ಲ ಭಾಷಾ ಶಿಕ್ಷಣವೆಂಬ ಸಮೂಹ ಸನ್ನಿ ಇನ್ನಿಲ್ಲದಂತೆ ಜನರನ್ನು ಆವರಿಸಿದೆ.  ಪೇಟೆ-ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಎಬಿಸಿಡಿಗಳ ಅಬ್ಬರ ಈಗ ಹಳ್ಳಿಹಳ್ಳಿಗಳ ಮನೆಗಳಲ್ಲೂ  ಅ‍ಆ‌ಇ‍ಈಗಳ ಸದ್ದಡಗಿಸುತ್ತಿದೆ.  ಇಂಗ್ಲಿಷ್ ಇಲ್ಲದಿದ್ದರೆ ಜೀವನವೊಂದು ಸೊನ್ನೆ ಎಂಬಷ್ಟು ವ್ಯಾಮೋಹ ಬೆಳೆಯತೊಡಗಿದೆ.  ಅತ್ತ ಕನ್ನಡವೂ ಅಲ್ಲದ, ಇತ್ತ ಇಂಗ್ಲಿಷೂ ಅಲ್ಲದ ಯುವಪೀಳಿಗೆಗಳು ತಯಾರಾಗುತ್ತಿವೆ. ಇಂತಹ ಯುವಜನರಿಂದ ಪ್ರಬುದ್ಧ ಬರವಣಿಗೆಗಳ ನಿರೀಕ್ಷೆ ಹುಸಿಯಾಗಲಾರದೇ?

ಈ ಬ್ಲಾಗಿಗರಿಗಿಂತ ಅದೆಷ್ಟೋ ಪಟ್ಟು ಹೆಚ್ಚು ಜನ ಕೈತುಂಬ ಸಂಬಳ (ವ್ಯಕ್ತಿಯ ಯೋಗ್ಯತೆಯನ್ನು ನಿರ್ಧರಿಸಲು ಇದಕ್ಕಿಂತ ಉತ್ತಮ ಮಾನದಂಡ ಬೇಕೇ?) ತರುವ ಉನ್ನತ ಹುದ್ದೆಯಲ್ಲಿದ್ದಾರೆ. ವೃತ್ತಿ ಕ್ಷೇತ್ರಕ್ಕೆ ಕಾಲಿಟ್ಟೊಡನೆಯೇ ನಿವೃತ್ತಿ ಜೀವನದ ಯೋಜನೆ ಮಾಡುವಷ್ಟು ಹಣ ಸಂಪಾದಿಸುತ್ತಾರೆ ಎಂದರೂ ಅತಿಶಯೋಕ್ತಿಯಾಗಲಾರದು.   ಈಗ ಹೇಳಿ, ಕನ್ನಡ ಮಾಧ್ಯಮದಲ್ಲಿ ಕಲಿಕೆ ಇವರ ರೆಕ್ಕೆಗಳನ್ನು ಕತ್ತರಿಸಿತೇ? ಇಲ್ಲ. ಕಣ್ತುಂಬ ಕನಸು ಹಾಗೂ ಸಾಧಿಸಬೇಕೆಂಬ ಛಲವಿದ್ದರೆ ಮಾಧ್ಯಮ ಖಂಡಿತ ತಡೆಯಾಗಲಾರದು.  ಬದಲಿಗೆ ಮಾತೃಭಾಷೆಯಲ್ಲಿ ಶಿಕ್ಷಣ, ಕಲಿಯುವ ಪ್ರಕ್ರಿಯೆಗೆ ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ನಮ್ಮ ಅರಿವಿನ ಹರಹನ್ನು ಮತ್ತಷ್ಟು ವಿಸ್ತಾರಗೊಳಿಸುತ್ತದೆ. 

ಇವರೂ ಕನ್ನಡ ಮಾಧ್ಯಮದಲ್ಲೇ ಓದಿ ಇಂದು ಮುಂದೆ ಬಂದಿಲ್ಲವೆ ಎಂದರೆ, ’ಅದು ಆ ಕಾಲಕ್ಕಾಯಿತು, ಆದರೆ ಈಗ ಕಾಲ ಮೊದಲಿನಂತೆ ಇಲ್ಲವಲ್ಲ,’ ಎಂಬುದು ಆಂಗ್ಲ ಭಾಷೆ ¸ÀªÀð  ಸಮಸ್ಯೆಗಳಿಗೂ ಪರಿಹಾರ ಎಂದು ಗಾಢವಾಗಿ ನಂಬಿರುವವರ ಸಮಜಾಯಿಷಿ.  ಈಗಿನ ಕಾಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಭ್ರಮೆ. ಭವಿಷ್ಯವೆಂದರೆ ಮತ್ತಿನ್ನೇನೂ ಅಲ್ಲ, ಕೇವಲ ಹಣ. ಶೈಕ್ಷಣಿಕ ಜೀವನವನ್ನು  ಅಂಕಗಳಲ್ಲಿಯೂ, ವೃತ್ತಿ ಜೀವನವನ್ನು ಆದಾಯದಲ್ಲಿಯೂ ಅಳೆಯುವ ಈ ಸ್ಪರ್ಧಾ ಯುಗದಲ್ಲಿ ನಿಜವಾದ ಆಸಕ್ತಿ, ಸಾಮರ್ಥ್ಯಗಳು ಪ್ರಕಟಗೊಳ್ಳದೆ ಇರಲೂಬಹುದು. ಅಂಕ, ಆದಾಯಗಳ ಮಹತ್ವವನ್ನು ನಾನು ಅಲ್ಲಗೆಳೆಯುತ್ತಿಲ್ಲವಾದರೂ, ಇವೆರಡರ ಹಿಂದೆ ನಮ್ಮ ಓಟ ಎಲ್ಲಿಯೋ ಅಂಕೆ ತಪ್ಪಿದೆ ಎಂದೆನಿಸುತ್ತದೆ.    

ಶಾಲೇತರ ತರಗತಿಗಳಿಗೆ ಹೋಗದಿದ್ದರೆ ಇಂಗ್ಲಿಷೆಂಬ ಕಬ್ಬಿಣದ ಕಡಲೆ ಕರಗುವುದೆಂತು? ನಮ್ಮ ಬಾಲ್ಯದಲ್ಲಿ (ಅಂದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ) ಇಂಗ್ಲಿಷ್ ಮತ್ತು ಗಣಿತ ಸುಲಭವಾಗಿ ಅರಗಿಸಿಕೊಳ್ಳಲಾಗದ ಕಷ್ಟದ ಪಠ್ಯವಿಷಯಗಳಾಗಿದ್ದವು. ಆದರೆ ಇಂದು ಇಂಗ್ಲಿಷೇ ಮಾಧ್ಯಮವಾಗಿ ಮಕ್ಕಳೆದುರು ನಿಂತಾಗ ಆ ಮಕ್ಕಳಿಗೆ ಹೇಗಾಗಲಿಕ್ಕಿಲ್ಲ? ಕಾಲ ಬದಲಾಯಿತೆಂದ ಮಾತ್ರಕ್ಕೆ ಮಕ್ಕಳ ಸಾಮರ್ಥ್ಯಗಳು ಬದಲಾಗುತ್ತವೆಯೇ? ಆ ಕಾಲಕ್ಕೂ ಮತ್ತು ಈ ಕಾಲಕ್ಕೂ ಮಕ್ಕಳು ಮಕ್ಕಳೇ ಅಲ್ಲವೇ? ಆದರೆ ಟ್ಯೂಷನ್ ಎಂಬ ಮಾಂತ್ರಿಕ ದಂಡದ ಮೂಲಕ ಅದನ್ನು ಮೆಟ್ಟಿ ನಿಲ್ಲಬಲ್ಲವೆಂಬ ಅತಿಯಾದ ಆತ್ಮವಿಶ್ವಾಸ ಈಗಿನ ಪೋಷಕರದ್ದು.  ಶಾಲೆ ಬಿಟ್ಟೊಡನೆ ಟ್ಯೂಷನ್ ಎಂದಾದರೆ ಮಕ್ಕಳಿಗೆ ಆಟವಾಡಲು ಸಮಯವೆಲ್ಲಿದೆ? ಮಕ್ಕಳಿಗೆ ಮಕ್ಕಳಾಗಿ ಇರಲು ನಾವು ಬಿಡುತ್ತಿಲ್ಲ. ನಮಗಿಂತಲೂ ನಮ್ಮ ಮಹತ್ವಾಕಾಂಕ್ಷೆಗಳು ಬಿಡುತ್ತಿಲ್ಲವೆಂದು ಹೇಳಬಹುದು. 

ಇತ್ತೀಚೆಗೆ, ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ನನ್ನ ಪರಿಚಯಸ್ಥರನ್ನೊಮ್ಮೆ,  "ನೀವು ಕನ್ನಡ ಶಾಲೆಗೆ ಮಕ್ಕಳನ್ನು ಹಾಕಿದ್ದೀರೆಂದು ತಿಳಿದಾಗ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ?" ಎಂದು ಕೇಳಿದೆ. "ಈಗಿನ ಕಾಲದಲ್ಲೂ ಕನ್ನಡದಲ್ಲೇ ಓದಿಸುತ್ತಿದ್ದೀರಲ್ವ ಎಂಬಲ್ಲಿಂದ ಹಿಡಿದು ನಿಮಗೇನು ಹುಚ್ಚೇ ಎಂಬಲ್ಲಿಯ ತನಕ" ಎಂದರು. ಆದರೆ ಅವರು ಇಂತಹ ತಲೆಹರಟೆಗಳಿಗೆ ತಲೆಕೆಡಿಸಿಕೊಂಡಿಲ್ಲವೆಂಬುದು ಬೇರೆ ವಿಷಯ.

ಮಕ್ಕಳು ಮಾತೃಭಾಷೆಯಲ್ಲಿ ಮಾತನಾಡುವಾಗ ತಮ್ಮ ಭಾಷೆಯಲ್ಲಿನ ಶಬ್ದಗಳು ತಿಳಿಯದೆಂದು ಅತಿಯಾಗಿ ಇಂಗ್ಲಿಷ್‍ನ ಪದಗಳನ್ನು ಬಳಸುವುದು ಹೆತ್ತವರಿಗೊಂದು ಒಣಪ್ರತಿಷ್ಠೆಯ ವಿಷಯ. ಮಾತಿನ ಮಧ್ಯೆ ಇನ್ನೂರೋ, ಎಂಟೋ, ಹದಿಮೂರೋ.. ಬಂದರೆ ಅಷ್ಟೆಂದರೆ ಎಷ್ಟೆಂದು ತಂದೆಯನ್ನೋ ಅಥವಾ ತಾಯಿಯನ್ನೋ ಕೇಳುವ ಪಾಡು. ಇವರಾದರೋ ಪ್ರತಿಸಲವೂ ಉತ್ತರಿಸುತ್ತಾರೆಯೇ ವಿನಃ ಅವುಗಳನ್ನು ಕಲಿತುಕೊಳ್ಳಲು ಹೇಳುವುದಿಲ್ಲ. ಆಂಗ್ಲ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಅದನ್ನೆಲ್ಲಾ ಅರಿತುಕೊಂಡು ಮಾಡುವುದೇನು ಮಹಾ ಎಂಬ ಅಸಡ್ಡೆ.

ಈ ತರಹದ ಅಸಡ್ಡೆ, ಉದಾಸೀನ ಮನೋಭಾವದಿಂದಾಗಿ  ಅತ್ತ ಅಲ್ಲಿಯೂ ಸಲ್ಲದ, ಇತ್ತ ಇಲ್ಲಿಯೂ ಇಲ್ಲದ ತ್ರಿಶಂಕು ಜನಾಂಗವೊಂದು ಸೃಷ್ಟಿಯಾಗುತ್ತಿದೆ. ಮಾತೃಭಾಷೆಯ ಉಳಿಯುವಿಕೆ, ಉದ್ಧಾರಗಳು ಒತ್ತಟ್ಟಿಗಿರಲಿ, ನಮ್ಮ ಆಂಗ್ಲ ಭಾಷಾ ವ್ಯಾಮೋಹದಿಂದಾಗಿ ನಮ್ಮ ಮಕ್ಕಳನ್ನೇ ಮಾತೃಭಾಷೆಯಲ್ಲಿನ ಸಮೃದ್ಧ ಸಾಹಿತ್ಯ, ಸಂಸ್ಕೃತಿಗಳಿಂದ ವಿಮುಖರನ್ನಾಗಿ ಮಾಡುತ್ತಿದ್ದೇವೆ. ಇದು ನಾವು ನಮ್ಮ ಮಕ್ಕಳಿಗೆ ತಿಳಿದೋ, ತಿಳಿಯದೆಯೋ ಮಾಡುತ್ತಿರುವ ವಂಚನೆಯಲ್ಲವೇ?  ಆಂಗ್ಲಭಾಷೆಯೇ ಸರ್ವ ಸಮಸ್ಯೆಗಳಿಗೆ ಮದ್ದೆಂಬ ಭ್ರಮೆಯಲ್ಲಿರುವ ನಾವು, ಹಿತ್ತಲಗಿಡವೂ ಮದ್ದೆಂಬುದನ್ನು ಏಕೆ ಮರೆತ್ತಿದ್ದೇವೆ?

ಸಾಣೂರು ಇಂದಿರಾ ಆಚಾರ್ಯ








No comments:

Post a Comment